logo

ಆಗಾಗ ಇಡಿ, ಐಟಿಯಂತಹ ತನಿಖಾ ಸಂಸ್ಥೆಗಳಿಂದ ವಿಪಕ್ಷಗಳಿಗೆ ಲವ್‌ ಲೆಟರ್‌ ಬರ್ತಾ ಇರುತ್ತೆ - ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯ

ಕಲಬುರಗಿ : ಇಡಿ, ಐಟಿ ಮುಂತಾದ ತನಿಖಾ ಸಂಸ್ಥೆಗಳು ಬಿಜೆಪಿಯ ಮುಂಚೂಣಿ ಘಟಕಗಳಾಗಿವೆ. ಹಾಗಾಗಿ, ವಿರೋಧ ಪಕ್ಷಗಳಿಗೆ ಆಗಾಗ ಲವ್ ಲೆಟರ್ ಕಳಿಸುತ್ತಿರುತ್ತದೆ. ಇದು ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು
ಯಡಿಯೂರಪ್ಪ ಸಿಎಂ ಇದ್ದಾಗ ಸಹಕಾರ ಡೈರಿ‌ ಸಿಕ್ಕಿತ್ತಲ್ಲ ಹಾಗೂ ಈಶ್ವರಪ್ಪ ಮನೆಯಲ್ಲಿ ನೋಟು ಎಣಿಸುವ ಮಷೀನ್ ಸಿಕ್ಕಿತ್ತಲ್ಲ ಅದೇನಾಯ್ತು. ತನಿಖೆ ಯಾಕೆ ನಡೆಸಲಿಲ್ಲ. ಬಿಜೆಪಿಯೂ ಕೂಡಾ ದೇಣಿಗೆ ಸ್ವೀಕರಿಸಿದೆ. ಆ ಬಗ್ಗೆ ಯಾಕೆ ನೋಟಿಸ್‌ ನೀಡಲಿಲ್ಲ ಎಂದು ಆಕ್ಷೇಪಿಸಿದರು.
ಕೇಜ್ರೀವಾಲ್ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರನ್ನು ಅರೆಸ್ಟ್ ಮಾಡಿರುವುದಕ್ಕೆ ಜರ್ಮನ್, ಅಮೇರಿಕಾ ಹಾಗೂ ಯುನೈಟೆಡ್ ನೇಷನ್ ನವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರಿಗೆ ಭಯ ಪ್ರಾರಂಭವಾಗಿದೆ. ಹಾಗಾಗಿ ತನಿಖಾ ಸಂಸ್ಥೆಗಳನ್ನು‌ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಪಾದನೆ ಮಾಡಿದರು.

ರಾಜ್ಯ ಬಿಜೆಪಿಯಲ್ಲಿ ಬಂಡಾಯ

ರಾಜ್ಯ ಬಿಜೆಪಿಯಲ್ಲಿ ಬಂಡಾಯ ಪ್ರಾರಂಭವಾಗಿದೆ. ಯಡಿಯೂರಪ್ಪ ಸೇರಿದಂತೆ ನಾಯಕರ ವಿರುದ್ದ ಅವರದೇ ಪಕ್ಷದವರಿಂದ ವಿರೋಧವಾಗುತ್ತಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಆಗಿರುವ ಗೊಂದಲವನ್ನು ಸರಿಪಡಿಸಬೇಕೆಂದು ಆಗ್ರಹಿಸುತ್ತಿದ್ದಾರೆ ಎಂದು ಬಿಜೆಪಿಗೆ ಟಾಂಗ್ ನೀಡಿದರು. ಬಿಜೆಪಿಗೆ ಸೋಲಿನ ಭೀತಿ ಪ್ರಾರಂಭವಾಗಿದೆ. ಆಂತರಿಕ‌ ಸರ್ವೆ ಪ್ರಕಾರ 200 ಸೀಟು‌ ಬರಲ್ಲ. ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂದು ಸುಮ್ಮನೆ ಹೇಳುತ್ತಾರೆ. ಕಾಂಗ್ರೆಸ್ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ‌ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖರ್ಗೆ ಸಾಹೇಬರನ್ನು ಸೋಲಿಸಿರುವ ಜಾಧವ್‌ ಎಂಪಿ ತರ ವರ್ತಿಸುವ ಬದಲು ಮೋದಿ ಅಭಿಮಾನಿ ಬಳಗದ ಘಟಕದ ಅಧ್ಯಕ್ಷರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ ಅವರು ಜಾಧವ್ 50 ಸಾಧನೆ ಮಾಡಿರುವಾಗಿ ಹೇಳಿದ್ದಾರೆ. ಕೇವಲ ಐದು ಸಾಧನೆ ತಿಳಿಸಲು ಎಂದು ಹೇಳಿದ್ದೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಗ್ರಾಮೀಣ ಅಧ್ಯಕ್ಷರು 10.02.2024 ರಂದು ನಮ್ಮ ಕಚೇರಿಗೆ ಪತ್ರ ಕಳಿಸಿ ನಮ್ಮ ಸರ್ಕಾರ‌ ಸಾಧನೆ ಬಗ್ಗೆ ಮಾಹಿತಿ ಕೇಳಿ ಪತ್ರ ಬರೆದಿದ್ದರು. ಆಗ ನಮ್ಮ ಸಾಧನೆಯನ್ನು ಅವರಿಗೆ ತೋರಿಸಲು ಕಾಂಗ್ರೆಸ್ ಯುವ ಘಟಕದವರು ಅವರ ಕಚೇರಿಯ ಮುಂದೆ ಬಸ್ ತೆಗೆದುಕೊಂಡು ಹೋದರೆ ಯಾರೊಬ್ಬರು ಬರಲಿಲ್ಲ ಎಂದು ಟೀಕಿಸಿದರು.

ಸಾಧನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ
ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಅವರು ಹೇಳಲಿ. ನಮ್ಮ ಸರ್ಕಾರದ ಸಾಧನೆ ಬಗ್ಗೆ ನಾನು ಹೇಳುತ್ತೇನೆ. ನಾನೇ ವೇದಿಕೆ ಸಿದ್ದಪಡಿಸುತ್ತೇನೆ ಹಾಗೂ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ. ಅವರ ಕಡೆಯಿಂದ ಯಾರೂ ಬೇಕಾದರೂ ಬರಲಿ ಅಥವಾ ನಮ್ಮ ಅಭಿವೃದ್ದಿ ನೋಡಬೇಕಿದ್ದರೆ ಎಸಿ ಸೌಲಭ್ಯ ಹೊಂದಿರುವ ಬಸ್ ವ್ಯವಸ್ಥೆ ಮಾಡುತ್ತೇನೆ ಜೊತೆಗೆ‌ ಒಬ್ಬ ಗೈಡ್ ವ್ಯವಸ್ಥೆ ಮಾಡುತ್ತೇನೆ ಬಿಜೆಪಿಗರು ನಮ್ಮೊಂದಿಗೆ ಬರಲಿ ಎಂದರು.

ಮನುವಾದಿಗಳಿಂದ ನನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದೇನೆ. ಆದರೆ ಅದಕ್ಕೆ ಜಾಧವ್ ಪ್ರತಿಕ್ರಿಯಿಸಿದ್ದಾರೆ. ನಾನು ಮನುವಾದಿಗಳು ಎಂದಿದ್ದೇನೆ ಅದಕ್ಕೆ ಜಾಧವ ಯಾಕೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು? ನಾನೇನಾದರೂ ಜಾಧವ ಹೆಸರು ಹೇಳಿದ್ದೇನಾ ಎಂದು ತಿರುಗೇಟು ನೀಡಿದರು.

0
685 views